ಬೆಂಗಳೂರು: ರಸ್ತೆ ಬದಿ ಮಲಗುವವರ ತಲೆ ಮೇಲೆ ಕಲ್ಲು ಎತ್ತಿಹಾಕಿ, ಹಣ ದೋಚುತ್ತಿದ್ದವನ ಬಂಧನ ರಸ್ತೆ ಬದಿ ಮಲಗುತ್ತಿದ್ದ ಜನರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು, ಹಣ ದೋಚಿದ್ದ ದುಷ್ಕರ್ಮಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ರಸ್ತೆ ಬದಿ ಮಲಗುತ್ತಿದ್ದ ಜನರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು, ಹಣ ದೋಚಿದ್ದ ದುಷ್ಕರ್ಮಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.ವಸಂತಪುರ ಗುಡ್ಡೆ 5ನೇ ಅಡ್ಡ ರಸ್ತೆ ನಿವಾಸಿ ಎಂ.ಗಿರೀಶ ಅಲಿಯಾಸ್ ಗಿರಿ ಬಂಧಿತನಾಗಿದ್ದು, ಇತ್ತೀಚೆಗೆ ಬನಶಂಕರಿ ಸಮೀಪ ರಸ್ತೆ ಬದಿ ಮಲಗಿದ್ದ ವ್ಯಕ್ತಿ ಮೇಲೆ ಕಲ್ಲು ಎತ್ತಿಹಾಕಿ, ಕೊಂದು ಪರಾರಿಯಾಗಿದ್ದ. ಈ ಕೃತ್ಯದ ತನಿಖೆಗಿಳಿದ ಇನ್ಸ್ ಪೆಕ್ಟರ್ ಚಿದಾನಂದ್. ಎಂ.ಗದಗ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ.ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ಈ ಭಿಕ್ಷುಕ ಎಂದು ಗುರುತಿಸಲಾಗಿದೆ. ಬನಶಂಕರಿ ಪ್ರಕರಣದಲ್ಲಿ ಹತ್ಯೆಯಾಗಿದ್ದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಎರಡೂ ಹತ್ಯೆಯ ಸಮಯದಲ್ಲಿ ಗಿರೀಶ್ ಮದ್ಯದ ಅಮಲಿನಲ್ಲಿದ್ದ, ಕೊಲೆಯ ಹಿಂದೆ ಯಾವುದೇ ಉದ್ದೇಶವಿಲ್ಲ. ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಲೈಂಗಿಕ ಕಿರುಕುಳ, ದರೋಡೆ, ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳಲ್ಲಿ ಗಿರೀಶ್ ಭಾಗಿಯಾಗಿದ್ದಾನೆ.ಸಿಟಿ ಮಾರ್ಕೆಟ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ 10 ತಿಂಗಳ ಜೈಲು ಶಿಕ್ಷೆ ಅನುಭವಿಸಿ 2020ರಲ್ಲಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಗಿರೀಶ್ ಮದ್ಯವ್ಯಸನಿ ಮತ್ತು ಮಾದಕ ವ್ಯಸನಿಯಾಗಿದ್ದು, ಈತ ರಾತ್ರಿ ವೇಳೆ ಜನರನ್ನು ಬೆದರಿಸಿ ಮೊಬೈಲ್‌ ಫೋನ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.